ಗುರುಕುಲ ವಿದ್ಯಾಪೀಠ

ಭಾರತದಲ್ಲಿ ಶಿಕ್ಷಣವಿದೆ ಆದರೆ, ಶಿಕ್ಷಣದಲ್ಲಿ ಭಾರತವೇ ಇಲ್ಲ. ಪರಕೀಯರ ಶಿಕ್ಷಣದಲ್ಲಿ ಧನ

ಸಂಪಾದನೆಯೇ ಮೂಲ ಗುರಿ. ಭಾರತೀಯ ಶಿಕ್ಷಣದ ಪರಮ ಉದ್ದೇಶವೇ ಆತ್ಮೋದ್ಧಾರ.

“ಸನಾತನ ಧರ್ಮ ರಾಜ್ಯದ ಸ್ಥಾಪನೆ ಅತೀ ಅವಶ್ಯವಾಗಿದೆ. ಸಂತರ ಮಾರ್ಗದರ್ಶನದಲ್ಲಿ ಕ್ಷಾತ್ರ ತೇಜಸ್ಸಿನ ಸಂಸ್ಕಾರವಂತ ಮತ್ತು ಸ್ವಾಭಿಮಾನಿ ತರುಣ-ತರುಣಿಯರ ತಯಾರಿಗಾಗಿ, ಗುರುಕುಲ ವಿದ್ಯಾಪೀಠ ಸ್ಥಾಪನೆಯು ಅತೀ ಅವಶ್ಯವಾಗಿದೆ” ಎನ್ನುವ ಶಬ್ದ ಶಂಖನಾದದಂತೆ ನಿದ್ದೆಯಲ್ಲಿಯೂ ನಮ್ಮನ್ನು ಎಚ್ಚರಿಸಿ-ಎಬ್ಬಿಸಿ ಹೇಳಿ ಹೋಗುತ್ತಿರುವಂತೆ ಭಾಸವಾಗುತ್ತಿತ್ತು. ಈ ಎಲ್ಲಾ ಬೆಳೆವಣಿಗೆಗಳೇ ಮುಂದಕ್ಕೆ ಗುರುಕುಲ ವಿದ್ಯಾಪೀಠ ಸ್ಥಾಪನೆಯ ಅತ್ಯದ್ಭುತವಾದ ಸತ್-ಸಂಕಲ್ಪಕ್ಕೆ ನಾಂದಿಯಾಗುತ್ತದೆ.

ಮನೆಯೇ ಮೊದಲ ಪಾಠಶಾಲೆ… ತಾಯಿಯೇ ಮೊದಲ ಗುರು.

ಸಂಸ್ಕಾರ-ಸಂಸ್ಕøತಿ, ಆಚಾರ-ವಿಚಾರಗಳ ಪಾಠವನ್ನು ಕಲಿಸಿಕೊಡಬೇಕಾಗಿದ್ದ ತಾಯಂದಿರು ತಮ್ಮ ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗುತ್ತಿದ್ದಾರೆ. ಕಲಿಕೆಯ ವಿಚಾರದಲ್ಲಿ ಮಕ್ಕಳಿಗಿಂತ ಹೆತ್ತವರಲ್ಲಿಯೇ ನಡೆಯುವ ಪೈಪೋಟಿಯ ಪರಿಣಾಮವಾಗಿ, ತಮ್ಮ ದಾಹವನ್ನು ತೀರಿಸಿಕೊಳ್ಳುವ ದಾಳವಾಗಿ ಮಕ್ಕಳು ಬಲಿಯಾಗುತ್ತಿದ್ದಾರೆ. ಮಕ್ಕಳಲ್ಲಿ ಇರುವ ಅಧಮ್ಯ ಶಕ್ತಿಯನ್ನು ಗುರುತಿಸುವ ಇಚ್ಛಾಶಕ್ತಿಯೇ ಹೆತ್ತವರಲ್ಲಿ ಸತ್ತು ಹೋದಂತೆ ಕಾಣುತ್ತಿದೆ. ಇದರ ಪರಿಣಾಮವಾಗಿ, ನಮ್ಮ ಮಕ್ಕಳಲ್ಲಿ ಸಂಸ್ಕಾರ-ಸಂಸ್ಕೃತಿ, ಆಚಾರ-ವಿಚಾರ, ಸ್ವಾಭಿಮಾನ, ಹೋರಾಟದ ಮನೋಭಾವ, ಸಾಮಾಜಿಕ ಕಾಳಜಿ, ರಾಷ್ಟ್ರಾಭಿಮಾನ ಮತ್ತು ಧರ್ಮದ ಮೇಲಿನ ಶ್ರದ್ಧೆಯ ಕೊರತೆ ಸಮಾಜದಲ್ಲಿ ಎದ್ದು ಕಾಣುತ್ತಿದೆ.

ಗುರು ಅಂದರೆ ಪ್ರದೀಪ…ಶಿಷ್ಯ ಅಂದರೆ ದೀಪ.

ಒಂದು ಉತ್ಕೃಷ್ಟವಾದ ಕಾರ್ಯದ ಸಾಧನೆಗಾಗಿ, ತನ್ನ ಸ್ವಂತದ್ದಾದ ಸಂಕಲ್ಪ ಶಕ್ತಿಯಿಂದ ಪ್ರಜ್ವಲಿಸುತ್ತಿರುವ ಪ್ರಕಾಶದಲ್ಲಿ, ದೀಪಗಳನ್ನು ಸೃಷ್ಟಿಸುವ ದಿವ್ಯ ಶಕ್ತಿಯೇ ಪ್ರದೀಪವಾಗಿದೆ. ಭೂಮಿಯ ಮೇಲೆ ನಡೆಯಲಿರುವ ಮಹಾನ್ ಕಾರ್ಯಗಳಿಗಾಗಿ ಪ್ರದೀಪದಿಂದ ಹಚ್ಚಿಸಿಕೊಂಡು, ಸದಾಕಾಲ ಉರಿದು ಜಗತ್ತಿಗೆ ಬೆಳಕಾಗುವುದೇ ದೀಪವಾಗಿದೆ.

ಭಾರತದಲ್ಲಿ ಶಿಕ್ಷಣವಿದೆ… ಆದರೆ ಶಿಕ್ಷಣದಲ್ಲಿ ಭಾರತವೇ ಇಲ್ಲ.

ಇವತ್ತಿನ ಶಿಕ್ಷಣವು ಅರ್ಥವ್ಯವಸ್ಥೆಯ ತಕ್ಷಣದ ಅವಶ್ಯಕತೆಗಳಿಗೆ ಜನರನ್ನು ಪೂರೈಸಲು ಇರುವ ಬೃಹತ್ತ್ ಉತ್ಪಾದನಾ ಘಟಕವಾಗಿದೆ. ನಮ್ಮನ್ನು ವ್ಯವಸ್ಥೆಯ ಗುಲಾಮರನ್ನಾಗಿ ಮಾಡಿರುವುದು ಮಾತ್ರವಲ್ಲದೆ, ಮನುಷ್ಯ ಮುಖ್ಯ ಅಲ್ಲ… ಸಮಾಜದ ಚಾಕಿರಿ ಮುಖ್ಯ ಅಂತಿದೆ. ಶಿಕ್ಷಣ ಅಂದರೆ ಶಿಕ್ಷೆ+ಹಣ. ಭವಿಷ್ಯದ ಒಂದು ಅದ್ಭುತವಾದ ಶಕ್ತಿಯಾಗಿ ಬೆಳೆಯ ಬೇಕಾಗಿರುವ ಮಗುವಿಗೆ ಶಿಕ್ಷೆ, ವಿದ್ಯಾ ಸಂಸ್ಥೆ ಎಂಬ ಮುಖವಾಡವಿರುವ ಲೂಟಿಕೋರರಿಗೆ ಹಣ ಎಂಬಂತಾಗಿದೆ ಈಗಿನ ಶಿಕ್ಷಣ ವ್ಯವಸ್ಥೆ.

ತನ್ನ ಶ್ರೇಷ್ಠವಾದ ವೃತ್ತಿ ಧರ್ಮದ ಮೇಲಿರುವ ಅಭಿಮಾನದ ಕೊರತೆ, ವಿದ್ಯಾರ್ಥಿಗಳನ್ನು ತನ್ನ ಮಕ್ಕಳಷ್ಟು ಪ್ರೀತಿಸದ ಮನಸ್ಥಿತಿ, ಕೇವಲ ಉಪನ್ಯಾಸ ಮಾಡಿ ಸಂಭಾವನೆ ಪಡೆಯೋದಕ್ಕೆ ಮಾತ್ರ ಸೀಮಿತವಾಗಿರುವ ಉಪನ್ಯಾಸಕರು ಇಂದು ನಮ್ಮ ಮಕ್ಕಳನ್ನು ಒಂದು ಶಕ್ತಿಯಾಗಿ ಬೆಳೆಸುವಲ್ಲಿ ಸೋಲುತ್ತಿದ್ದಾರೆ. ಹಾಗಾಗಿ ಸುದೃಢವಾದ ರಾಷ್ಟø ನಿರ್ಮಾಣ ಕಾರ್ಯದಲ್ಲಿ ಪಾತ್ರವಹಿಸಬೇಕಾಗಿದ್ದ ಮಕ್ಕಳ ಭವಿಷ್ಯ ಏನಾಗುತ್ತಿದೆ..?

ಇಂದಿನ ಯುವ ಸಮಾಜವು ಸಾಮಾಜಿಕ ಜಗತ್ತಿಗೆ ಕಾಲಿಡುತ್ತಿದ್ದಂತೆ, ಭ್ರಷ್ಟಾಚಾರವನ್ನೇ ಬದುಕಾಗಿಸಿಕೊಂಡ ಮತ್ತು ಧರ್ಮ-ಜಾತಿಗಳನ್ನು ಒಡೆದಾಳುವ ರಾಜಕೀಯ ನಾಯಕರುಗಳು ನಮ್ಮ ಮಕ್ಕಳ ಮನಸ್ಸಿನಲ್ಲಿ ನಿಜವಾದ ನಾಯಕರಾಗಿ ಮೆರೆಯುತ್ತಿದ್ದಾರೆ. ನೀತಿ ಮತ್ತು ಮಾನವೀಯತೆ ಇಲ್ಲದ ವ್ಯಾಪಾರದಲ್ಲಿ ಹಣಗಳಿಕೆಯೊಂದೇ ಬದುಕಿನ ಸಾಮಥ್ರ್ಯ-ಸಾಧನೆ ಅಂತಾ ಬೀಗುವ ಉದ್ಯಮಿಗಳು ನಮ್ಮ ಮಕ್ಕಳಿಗೆ ಇಂದು ಮಹಾನ್ ಸಾಧಕರಾಗಿ ಕಾಣುತ್ತಿದ್ದಾರೆ. ಸಂಸ್ಕೃತಿ-ಸಂಸ್ಕಾರದ ಪರಿವೆಯೇ ಇಲ್ಲದ ಸಿನೇಮಾ ತಾರೆಯರು ಇಂದು ನಮ್ಮ ಮಕ್ಕಳ ಪಾಲಿನ ಹೀರೋಗಳಾಗುತ್ತಿದ್ದಾರೆ. ಹಾಗಾದರೆ… ನಮ್ಮ ಮಕ್ಕಳು ಈ ಭೂಮಿಯ ಮೇಲೆ ಚರಿತ್ರೆ

ನಿರ್ಮಾಣ ಮಾಡಬಲ್ಲ ಶಕ್ತಿಗಳಾಗುವುದು ಹೇಗೆ…?

ಭೂಮಿಯ ಮೇಲೆ ನಡೆಯಲಿರುವ ಒಂದು ಅದ್ಭುತವಾದ ಕಾರ್ಯದ ಸಂಕಲ್ಪಕ್ಕಾಗಿ ನಮ್ಮನ್ನು ನಾವು ಸಂಪೂರ್ಣವಾಗಿ ಸಮರ್ಪಣೆ ಮಾಡಿಕೊಳ್ಳಲೇಬೇಕು ಎಂಬ ಗಟ್ಟಿಯಾದ ದಿಟ್ಟ ಹೆಜ್ಜೆಯ

ಮಹಾನ್ ಸಂಕಲ್ಪಕ್ಕೆ ಇದು ನಾಂದಿಯಾಗುತ್ತದೆ.