About Us

ವಿದ್ಯಾರ್ಥಿ ಚಳುವಳಿಯಿಂದ...ಗುರುಕುಲ ವಿದ್ಯಾಪೀಠ ಸ್ಥಾಪನೆಯ ತನಕ...

ಧರ್ಮದ ಸ್ಥಾಪನೆಗಾಗಿ ತಮ್ಮ ಬದುಕನ್ನು ಸಮರ್ಪಣೆ ಮಾಡುತ್ತಲೇ ಗತಿಸಿದ ಜೀವಾತ್ಮಗಳು, ಮತ್ತೊಮ್ಮೆ ಈ ಪುಣ್ಯ ಭೂಮಿಯ ಮೇಲೆ ಬಂದು ಉತ್ಕ್ರಷ್ಟವಾದ ಕಾರ್ಯದ ಅನುಷ್ಠಾನಕ್ಕಾಗಿ ನಮ್ಮ ಅರಿವಿಗೆ ಬರದಂತೆ ನಮ್ಮನ್ನು ಪ್ರೇರೇಪಿಸುತ್ತಿದೆಯೇ...? ಎಂಬುವುದರ ಸತ್ಯದ ದರ್ಶನವಿದು. ಧರ್ಮ ಸಂಸ್ಥಾಪನಾ ಪೀಠ, ಯುವ ಭಾರತ್ ಕರ್ನಾಟಕ ಎಂದಿಗೂ ಯಾವುದೇ ರಾಜಕೀಯ ಪಕ್ಷಗಳ ಜೊತೆ ಗುರುತಿಸಿಕೊಂಡಿಲ್ಲ. ಮುಂದೆಯೂ ಅದರ ಅವಶ್ಯಕತೆ ಬರುವುದಿಲ್ಲ. ನಮ್ಮ ಯಾವುದೇ ಕಾರ್ಯಗಳಿಗೂ ಸಾರ್ವಜನಿಕರಿಂದ ಈವರೆಗೆ ದೇಣಿಗೆ ಪಡೆದುಕೊಂಡಿಲ್ಲ. ಎರಡು ದಶಕಗಳ ಸುದೀರ್ಘವಾದ ಸಂಘಟನಾ ಬದುಕಿನ ವಾಸ್ತವ ಚಿತ್ರಣವಿದು.

1997 - 1998

ರಾಷ್ಟ್ರಭಕ್ತರ ತಯಾರಿಯ ಕೇಂದ್ರಬಿಂದುವಾದ ಉಡುಪಿಯ ಬೋರ್ಡ್ ಕಾಲೇಜು

ಅನ್ಯಾಯಗಳು ನಡೆದಾಗ ಯಾವುದಕ್ಕೂ ಅಂಜದೆ ಪ್ರತಿರೋಧ ತೋರಿಸುವ ಮನಸ್ಥಿತಿ. ಸವಾಲುಗಳು ಎದುರಾದಾಗ ಸಮರ್ಥವಾಗಿ ಎದುರಿಸುವ ಎದೆಗಾರಿಕೆ. ಯಾರಿಗೇನೇ ಸಮಸ್ಯೆಗಳು ಬಂದರೂ ತಮ್ಮದೇ ಕಷ್ಟಗಳೆಂಬಂತೆ ಅಚ್ಚುಕಟ್ಟಾಗಿ ನಿಭಾಯಿಸುವ ಉತ್ಕಟವಾದ ಸ್ನೇಹ ಜೀವಿ ತರುಣರು ಒಂದು ಕಡೆಯಾದರೆ, ಕಷ್ಟ-ಅವಮಾನಗಳು ಎದುರಾಗಬಹುದು ಅನ್ನಿಸಿದಾಗಲೆಲ್ಲಾ, ನಮ್ಮ ಬೆನ್ನ ಹಿಂದೆ ನಿಂತು ಯಾವುದೇ ಅಪೇಕ್ಷೆ ಬಯಸದೆ ಸದ್ದಿಲ್ಲದೇ ಮಾಡುವ ಸೇವೆ-ತ್ಯಾಗ ಮಾತ್ರವಲ್ಲ, ಯಶಸ್ಸು ನಮ್ಮದೇ ಎನ್ನುವ ರೀತಿಯಲ್ಲಿ ನಮ್ಮ ಕಾರ್ಯಗಳಿಗೆ ಸ್ಪೂರ್ತಿ ತುಂಬುವ ತಾಯಿ ಹೃದಯದ ತರುಣಿಯರು ಮತ್ತೊಂದು ಕಡೆ. ಎಲ್ಲಿ-ಎಲ್ಲಿಂದಲೋ ಇಂತಹ ಜೀವಗಳನ್ನು ಸೆಳೆದು ತಂದು ಭವಿಷ್ಯದಲ್ಲಿ ನಡೆಯಬಹುದಾದ ಮಹಾನ್ ಕಾರ್ಯಕ್ಕೆ ಅಡಿಪಾಯ ಹಾಕಿದ್ದು ಮಾತ್ರ, ಉಡುಪಿಯ ಸರಕಾರಿ ಪ್ರಥಮ ದರ್ಜೆ ಕಾಲೇಜು(ಬೋರ್ಡ್ ಹೈಸ್ಕೂಲ್) ಎಂಬುವುದು ಅವಿಸ್ಮರಣೀಯ.

1998 - 1999

ದ್ವಿತೀಯ ಪದವಿ ತರಗತಿಗೆ ಬಂದು ಕೂರುವ ಸಮಯ. ತುಂಬಾ ಸಂತೋಷದ ಸಂಗತಿ ಪದವಿಯ ಪ್ರಥಮ ವರ್ಷದಲ್ಲಿ ಹೊಸದಾಗಿ ಪ್ರವೇಶ ಪಡೆದು ನಮ್ಮನ್ನು ಬಂದು ಕೂಡಿದವರಲ್ಲಿ ಹೆಚ್ಚಿನವರು ನಮ್ಮಂತಹ ನೇರ ನಡೆ-ನುಡಿಯ ಬೆಂಕಿ ಉಂಡೆಗಳೆ. ಸಮಾನ ಮನಸ್ಥಿತಿ ಆಗಿರುವ  ಕಾರಣಕ್ಕೆ ಬಹಳ ಬೇಗ ನಮ್ಮ ಜೊತೆಯಾಗುತ್ತಾರೆ.  

ಇಂತಹ ಸಮಯದಲ್ಲಿ ನಾವು ಯಾರೂ ಊಹಿಸಲು ಅಸಾಧ್ಯವಾದ ದುರಂತವೊಂದು ನಮ್ಮ ಕಾಲೇಜಿನಲ್ಲಿ ನಡೆದು ಹೋಗುತ್ತದೆ. ಅದು ನಮ್ಮ ಕಾಲೇಜಿನ ಅಂತಿಮ ಪದವಿಯ ಅತ್ಯಂತ ಬಡ ಕುಟುಂಬದ ಅಮಾಯಕ ಹೆಣ್ಣು ಮಗಳೋರ್ವಳ ಆತ್ಮಹತ್ಯೆ. ಇದು ಆತ್ಮಹತ್ಯೆ ಅಲ್ಲ... ಇದೊಂದು ವ್ಯವಸ್ಥಿತವಾದ ಕೊಲೆ ಅಂತಾ ಇಡೀ ಕಾಲೇಜು ಮಾತನಾಡಲಾರಂಭಿಸುತ್ತದೆ. ಹೆಣ್ಣು ಮಗುವಿನ ಸಾವಿಗೆ ನ್ಯಾಯ ಸಿಗಬೇಕು ಎಂಬ ಕೂಗು ಜೋರಾಗುತ್ತದೆ.  

ಜವಾಬ್ದಾರಿಯುತ ಸ್ಥಾನದಲ್ಲಿದ್ದ ಕಾಲೇಜಿನ ವಿದ್ಯಾರ್ಥಿ ಸಂಘ-ಉಪನ್ಯಾಸಕ ವೃಂದ-ಆಡಳಿತ ಮಂಡಳಿಯು  ದಾರಿಯಲ್ಲಿ ಹೋಗುವ ಮಾರಿಯನ್ನು ಮನೆಯೊಳಗೆ ಕರೆಯುವ ಪ್ರಯತ್ನ ಮಾಡಬೇಡಿ ಎಂದು ಹೇಳುತ್ತಿರುವಂತೆಯೇ, ಆ ಪ್ರಕರಣ ಅಲ್ಲಿಗೆ ನಿಂತು ಹೋಗುತ್ತದೆ. ಆ ಹೊತ್ತಿಗೆ ಕಾಲೇಜು ವಿದ್ಯಾರ್ಥಿ ಸಂಘ ಮತ್ತು ನಮ್ಮ ಮಧ್ಯೆ ಸಂಘರ್ಷಗಳೇ ನಡೆದು ಬಿಡುತ್ತದೆ. ಈ ಘಟನೆಯ ನಂತರವೇ ಅಮಾಯಕರ ಬದುಕಿಗೆ  ನಾವು ಧ್ವನಿಯಾಗಬೇಕೆಂಬ ತುಡಿತ ಜೋರಾಗಿದ್ದು. 

1999 - 2000

ಸಮಯ ನಮ್ಮ ಕಾಲೇಜು ಜೀವನದ ಅಂತಿಮ ವರ್ಷ

ಒಂದು ಕಡೆ ಅಗಲುವಿಕೆಯ ನೋವಿನ ಕ್ಷಣಗಳು, ಮತ್ತೊಂದು ಕಡೆ ವಿದ್ಯಾರ್ಥಿ ಜೀವನದಲ್ಲಿ ಸಂಪಾದಿಸಿದ್ದ  ಪರಿಶುದ್ಧವಾದ ಸ್ನೇಹ ವ್ಯರ್ಥವಾಗಕೂಡದು, ದೊರೆತಂತಹ ಅನುಭವಗಳಿಂದ ವಿಶೇಷವಾಗಿರುವುದನ್ನು ಏನನ್ನಾದರು ಸಾಧಿಸಿ ಹೋಗಬೇಕೆನ್ನುವ ತುಡಿತ. ಈ ವರ್ಷವೂ ಪ್ರಥಮ ವರ್ಷದ ಪದವಿಗೆ ಪ್ರವೇಶ ಪಡೆದು ಬಂದವರು ಕೂಡಾ ಒಬ್ಬರನ್ನೊಬ್ಬರು ಮೀರಿಸುವ ಉತ್ಸಾಹಿ ತರುಣರು. 

ವಿದ್ಯಾರ್ಥಿ ಜೀವನದ ಚರಿತ್ರೆಯಲ್ಲಿಯೇ ಒಂದು ಅದ್ಭುತವಾದ ವಿದ್ಯಾರ್ಥಿ ಶಕ್ತಿಯ ಒಗ್ಗೂಡುವಿಕೆ  ಬಹುಶಃ ಬೋರ್ಡ್ ಕಾಲೇಜಿನ ಇತಿಹಾಸದಲ್ಲಿಯೇ ಪ್ರಥಮವಿರಬಹುದು.

"ವಿದ್ಯಾರ್ಥಿ ಪ್ರತಿಬಿಂಬ" - ನೂತನ ವಿದ್ಯಾರ್ಥಿ ಸಂಘಟನೆ ಅಸ್ತಿತ್ವಕ್ಕೆ

ವರುಷದ ಹಿಂದೆ ನಡೆದು ಹೋದ ವಿದ್ಯಾರ್ಥಿನಿಯ ಸಾವಿನ ವಿಚಾರವಾಗಿ ಮತ್ತೆ ಹೋರಾಟವನ್ನು ಪ್ರಾರಂಭಿಸುವುದರ ಬಗ್ಗೆ ನಮ್ಮಲ್ಲಿ ಚರ್ಚೆಯಾಗುತ್ತಿರುವಾಗಲೇ, ಕಾಲೇಜು ವಿದ್ಯಾರ್ಥಿ ಸಂಘದ ನಾಯಕನ ಆಯ್ಕೆ ಚುನಾವಣೆಯ ಮೂಲಕವೇ ನಡೆಸಬೇಕೆಂಬ ಕೂಗು ಕೂಡಾ ಜೋರಾಗುತ್ತದೆ.  ಈ ಮೊದಲೇ ನಮ್ಮ ಮಾನಸಿಕತೆಯನ್ನು ಚೆನ್ನಾಗಿ ಅರಿತ್ತಿದ್ದ ಉಪನ್ಯಾಸಕ ವೃಂದ, ವಿದ್ಯಾರ್ಥಿ ಸಂಘದ ನೇತೃತ್ವ ನಮ್ಮ ಕೈಗೆ ಸಿಗದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗುತ್ತದೆ. ನಮಗಾದ ಈ ಅನ್ಯಾಯವನ್ನು ಒಂದು ಸವಾಲಾಗಿ ಸ್ವೀಕಾರ ಮಾಡಲಾಗುತ್ತದೆ. ವಿದ್ಯಾರ್ಥಿಗಳಿಗೆ ದ್ರೋಹವೆಸಗಿದ ಈ ವ್ಯವಸ್ಥೆಯ ವಿರುದ್ಧ ಹೊಸತಾದ ವಿದ್ಯಾರ್ಥಿ ಸಂಘವನ್ನು ಅಸ್ತಿತ್ವಕ್ಕೆ ತರುವ ಬಗ್ಗೆ ಚಿಂತನೆಗಳು ಆರಂಭವಾಗುತ್ತದೆ.  ಒಂದೇ ಕಾಲೇಜಿನ ಕ್ಯಾಂಪಸ್ ಒಳಗೆ ಎರಡೆರಡು ವಿದ್ಯಾರ್ಥಿ ಸಂಘಗಳು. ಈ ಬೆಳವಣಿಗೆಗಳು ಕಾಲೇಜು ಉಪನ್ಯಾಸಕ ಮಂಡಳಿಯ ಒಡೆದಾಳುವ ನೀತಿಯನ್ನು ಪ್ರದರ್ಶನಕ್ಕೆ ಇಟ್ಟಂತೆ ತೋರುತ್ತಿತ್ತು. ಏನೇ ಆಗಲಿ, ನಮ್ಮ ಆಕ್ರೋಶ ಮತ್ತು ಉತ್ಸಾಹಗಳು ಅಬ್ಬರಿಸಿ ಬೋರ್ಗರೆವ ಸಮುದ್ರದಂತೆ ಕಾಣುತಿತ್ತು. ನಮ್ಮ ಎಲ್ಲಾ ಬೆಳವಣಿಗೆಯಿಂದ ಹತಾಶರಾಗಿ ಹೋದ ಉಪನ್ಯಾಸಕರು "ಇಡೀ ಕಾಲೇಜನ್ನು ನಿಯಂತ್ರಣದಲ್ಲಿಟ್ಟುಕೊಂಡ ಭಯೋತ್ಪಾದಕರು ನೀವು" ಎಂಬ ಹಣೆಪಟ್ಟಿ ಕಟ್ಟಿ ನಮ್ಮನ್ನು ಅವಮಾನಿಸುತ್ತಾರೆ. ಇಂತಹ ಮಾತುಗಳನ್ನು ಕೇಳಿಯೂ ಸುಮ್ಮನಿರಲು ಹೇಗೆ ಸಾಧ್ಯ...? ಈ ಒಂದು ಮಾತು ನಮ್ಮನ್ನು ಎಷ್ಟು ಚುಚ್ಚುತ್ತಿತ್ತು..?ಹೌದು...ಅನ್ಯಾಯವಾಗಿ ಭಯವನ್ನು ಹುಟ್ಟಿಸುವವರಿಗೆ ನಾವು ಭಯೋತ್ಪಾದಕರೆ. ಆದರೆ ಮುಂದಕ್ಕೆ ರಾಷ್ಟ್ರದ ಶಾಂತಿ ಸ್ಥಾಪನೆಗಾಗಿ ಮಹತ್ತರವಾದ ಕ್ರಾಂತಿ ಮಾಡುವ ಅಪ್ಪಟ ರಾಷ್ಟ್ರಭಕ್ತ ತರುಣರಾಗಿ ಸಿದ್ಧಗೊಳ್ಳಬೇಕೆಂಬ ಹಠಕ್ಕೆ ಬೀಳುವುದೇ ನಾವಿಲ್ಲಿ. ಇದರ ಪರಿಣಾಮವಾಗಿ "ವಿದ್ಯಾರ್ಥಿ ಪ್ರತಿಬಿಂಬ" ಎಂಬ ನಾಮಧೇಯದೊಂದಿಗೆ ನೂತನವಾದ ಸಂಘಟನೆಯು ಅಸ್ತಿತ್ವಕ್ಕೆ ಬಂದೇ ಬಿಡುತ್ತದೆ. 

ಈ ಮೊದಲೇ ಉಲ್ಲೇಖ ಮಾಡಿರುವಂತೆ, ಇಲ್ಲಿ ಯಾವುದೇ ಸ್ವಾರ್ಥವಿಲ್ಲ. ವಿದ್ಯಾರ್ಥಿಗಳ ಹಿತವೇ ಪ್ರಮುಖ ವಿಷಯ. ಉತ್ಸಾಹಿ ತರುಣರಿಂದ ಸಂಘಟಿಸಲ್ಪಟ್ಟ "ವಿದ್ಯಾರ್ಥಿ ಪ್ರತಿಬಿಂಬ" ಮೊದಲೇ ಅಂದುಕೊಂಡಂತೆ, ಅಮಾಯಕ ವಿದ್ಯಾರ್ಥಿನಿಯ ಸಾವಿಗೆ ನ್ಯಾಯ ದೊರಕಿಸಿ ಕೊಡುವ ಹೋರಾಟದ ಯೋಜನೆ ಸಿದ್ದಗೊಳಿಸುತ್ತದೆ. ಆ ಹೊತ್ತಿಗಾಗಲೇ, ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ವಿದ್ಯಾರ್ಥಿಗಳನ್ನು ಸಂಘಟಿಸಿಕೊಂಡು, ಬಲಿಷ್ಟವಾಗಿ ಬೆಳೆದು ನಿಂತ ಮಂಗಳೂರು ವಿಶ್ವ ವಿದ್ಯಾನಿಲಯ ಸರ್ವ ಕಾಲೇಜು ವಿದ್ಯಾರ್ಥಿ ಕ್ರಿಯಾ ಸಮಿತಿ(ರಿ).  ಪ್ರತಿಬಿಂಬದ ಹೋರಾಟದ ಬೆನ್ನಿಗೆ ನಿಲ್ಲುತ್ತದೆ.  ನಮ್ಮ ಹೋರಾಟವು ಯಾವುದೋ ಒಂದು ತಾರ್ಕಿಕ ಹಂತವನ್ನು ತಲುಪುತ್ತಿದೆ ಅನ್ನುವಷ್ಟರಲ್ಲಿ, ಈ ಪ್ರಕರಣದ ಸಂಪೂರ್ಣ ಸತ್ಯಾಸತ್ಯತೆಯನ್ನು ಅರಿತು ನಮ್ಮ ಹೋರಾಟದಲ್ಲಿ ಗುರುತಿಸಿಕೊಂಡವರು ಹಿಂದೆ ಸರಿದ  ಪರಿಣಾಮವಾಗಿ, ನಮ್ಮ ಹೋರಾಟವು ಅಲ್ಲಿಗೆ ನಿಂತು ಬಿಡುತ್ತದೆ. ಒಂದು ಅಮಾಯಕ ಜೀವಕ್ಕೆ ನ್ಯಾಯ ದೊರಕಿಸಿ ಕೊಡದ ಪಾಪ ಪ್ರಜ್ಞೆ ನಮ್ಮನ್ನು ಕಾಡಲು ಪ್ರಾರಂಭಿಸುತ್ತದೆ. ಇಲ್ಲಿಂದಲೇ ನೋಡಿ ಸಮಾಜದಲ್ಲಿ ನಡೆಯುವ ಅನ್ಯಾಯವನ್ನು ಮೆಟ್ಟಿನಿಲ್ಲಲೇಬೇಕೆಂಬ ಮನಸ್ಥಿತಿಗೆ ನಾವು ಬರುವುದು.

ವಿದ್ಯಾರ್ಥಿ ಕ್ರಿಯಾ ಸಮಿತಿಯೊಂದಿಗೆ ವಿಲೀನ

ನಿಷ್ಕಲ್ಮಷ ಮತ್ತು ನಿಸ್ವಾರ್ಥಿ ಹೃದಯಗಳು ಸಮರ್ಪಿಸಿದ ಸಮಯ-ಸಂಪನ್ಮೂಲ ಮತ್ತು ತ್ಯಾಗದ ಫಲವೋ ಎಂಬಂತೆ, ವಿದ್ಯಾರ್ಥಿ ಪ್ರತಿಬಿಂಬ ಸಂಘಟನೆಯು ನಮ್ಮೆಲ್ಲರ ನಿರೀಕ್ಷೆಗೂ ಮೀರಿ ಬೆಳೆದು ನಿಲ್ಲುತ್ತದೆ. ಕಾರ್ಯ ಕ್ಷೇತ್ರವು ವಿಸ್ತಾರಗೊಳ್ಳುತ್ತಾ ಹೋದಂತೆ, ಮಂಗಳೂರು ವಿಶ್ವ ವಿದ್ಯಾನಿಲಯ ಸರ್ವ ಕಾಲೇಜು ವಿದ್ಯಾರ್ಥಿ ಕ್ರಿಯಾ ಸಮಿತಿಯೊಂದಿಗೆ ವಿಲೀನಗೊಳಿಸುವ ತೀರ್ಮಾನಕ್ಕೆ ಬರಲಾಗುತ್ತದೆ.

ಆ ನಂತರದ ದಿನಗಳಲ್ಲಿ ವಿದ್ಯಾರ್ಥಿ ಕ್ರಿಯಾ ಸಮಿತಿಯು ಕಾಸರಗೋಡಿನ ಗಡಿ ಭಾಗದಿಂದ ಹಿಡಿದು  ಬೈಂದೂರಿನ ತನಕ ಎಲ್ಲಾ ಪದವಿ ಕಾಲೇಜುಗಳ ವಿದ್ಯಾರ್ಥಿಗಳನ್ನು ಸಂಘಟಿಸಿಕೊಂಡು, ಪರಿಣಾಮಕಾರಿಯಾದ ಕಾರ್ಯಚಟುವಟಿಕೆಗಳ ಮೂಲಕ ಬೇರೆ ಎಲ್ಲಾ ವಿದ್ಯಾರ್ಥಿ ಸಂಘಟನೆಗಳನ್ನು ಮೀರಿಸುವಷ್ಟರ  ಮಟ್ಟಿಗೆ ತನ್ನ ಪ್ರಭಾವವನ್ನು ಬೆಳೆಸಿ ಬಿಡುತ್ತದೆ.

ಧರ್ಮ ಸಂಸ್ಥಾಪನಾ ಪೀಠ, ಯುವ ಭಾರತ್ ಕರ್ನಾಟಕ ರಾಷ್ಟ್ರಕಾರ್ಯಕ್ಕಾಗಿ ಸಮರ್ಪಣೆ

ವಿದ್ಯಾರ್ಥಿ ಜೀವನದಲ್ಲಿ ಎದುರಿಸಿದ ಸಮಸ್ಯೆ-ಸವಾಲು-ಅನ್ಯಾಯ-ಅವಮಾನಗಳೇ ನಮ್ಮ ಮುಂದಿನ ಸಂಘಟನಾತ್ಮಕ ಬದುಕಿಗೆ ಅತ್ಯಮೂಲ್ಯವಾದ ಹೆಜ್ಜೆಗಳಾಗಿ ಬಿಡುತ್ತವೆ. ವಿದ್ಯಾರ್ಥಿ ಜೀವನ ಮುಗಿಸಿ ಹೊರಗಿನ ಸಾಮಾಜಿಕ ಬದುಕಿಗೆ ಬಂದು ಸುಮ್ಮನಿರಕೂಡದು. ಸಮಾಜದ ಹಿತಕ್ಕಾಗಿ ಚಿಂತಿಸುವ ಧ್ವನಿಯಾಗಬೇಕು, ವಿಶಾಲವಾದ ಸಾಗರದಂತಿರುವ ಈ ಸಮಾಜದಲ್ಲಿ ನಮ್ಮ ಬದುಕನ್ನು ರಾಷ್ಟ್ರದ ಹಿತಕ್ಕಾಗಿ ಸಮರ್ಪಿಸಬೇಕು. ಈ ಭೂಮಿಯ ಮೇಲೆ ಉಸಿರಿಲ್ಲದಾಗ ನಮ್ಮ ಹೆಸರಿರಬೇಕು. ಇಂತಹ ಶ್ರೇಷ್ಠವಾದ ಬದುಕು ನಮ್ಮದಾಗಬೇಕು ಎಂಬ ಚಿಂತನೆಯಲ್ಲಿ ರಾಷ್ಟ್ರ ಕಾರ್ಯಕ್ಕಾಗಿ ಸಮರ್ಪಣೆಯಾಗಲು ಧರ್ಮ ಸಂಸ್ಥಾಪನಾ ಪೀಠ ಯುವ ಭಾರತ್ ಕರ್ನಾಟಕವು ಅತೀ ಉತ್ಸಾಹದಿಂದ ಸಾಗುತ್ತದೆ.  ಮುಂದಿನ ದಿನಗಳಲ್ಲಿ ಮಂಗಳೂರಿನ ಪ್ರಸಿದ್ಧ ವಕೀಲರಾದ ಪಿ.ಪಿ.ಹೆಗ್ಡೆ ಸ್ಥಾಪಿಸಿದ ಸಾವಿರಾರು ಬಿಸಿರಕ್ತದ  ತರುಣರಿಂದ ಸಂಘಟಿಸಲ್ಪಟ್ಟ ಯುವಶಕ್ತಿ ಸಂಘಟನೆಯ ಸಂಪರ್ಕ ನಮಗಾಗುತ್ತದೆ.

ಪಿ.ಪಿ.ಹೆಗ್ಡೆ ಯವರ ಯುವಶಕ್ತಿ ಗರೋಡಿಯಲ್ಲಿ ದೊರೆತ ರಾಷ್ಟ್ರೀಯ ವಿಚಾರಧಾರೆಗಳ ಜ್ಞಾನ ಅತ್ಯದ್ಭುತ. ರಾಷ್ಟ್ರದ ಮೇಲಿನ ಅಪರಿಮಿತ ಭಕ್ತಿ, ಸನಾತನ ಧರ್ಮದ ಮೇಲಿನ ಶ್ರದ್ಧೆ, ನಮ್ಮ ರಕ್ತದ ಕಣಕಣದಲ್ಲೂ ವಿಶೇಷವಾಗಿರುವ ಸಂಚಲನವನ್ನು ಉಂಟು ಮಾಡುತ್ತದೆ. ನಮ್ಮ ಬದುಕಿನಲ್ಲಿ ಸಾಮಾನ್ಯರಂತೆ ಬದುಕದೆ, ಅಸಾಧ್ಯವಾದುದನ್ನು ಸಾಧಿಸಿಯೇ ಸಾಯೋದು ಅನ್ನುವ ಧೈರ್ಯ ಮತ್ತು ಛಲ ಹುಟ್ಟಿದ್ದೇ ಇಲ್ಲಿಂದ. 

ಮುಂದಕ್ಕೆ ನಡೆಯಲಿರುವುದನ್ನು ಕಾಲವೇ ನಿರ್ಣಯಿಸಲಿದೆ ಎಂಬ ಮಾತಿನಂತೆ, ಕ್ರಾಂತಿಕಾರಿಗಳ ಬಲಿದಾನ, ರಾಜ-ಮಹಾರಾಜರುಗಳ ಸಾಧನೆ, ಮಹಾನ್ ಸಾಧು-ಸಂತರ ಅಪಾರವಾದ ಜ್ಞಾನ, ಭಗವದ್ಗೀತಾ ಸಂದೇಶಗಳು ಅಗಾಗ್ಗೆ ನಮ್ಮ ಕಣ್ಣೆದುರು ಬಂದು ಏನನ್ನೋ ಹೇಳುತ್ತಿದೆ ಅನ್ನಿಸುತ್ತಿತ್ತು. ಈ ಎಲ್ಲದರ ಹಿಂದಿರುವ ಶಕ್ತಿಗಳು ಭೂಮಿಯ ಮೇಲೆ ನಡೆಯಲಿರುವ ಯಾವುದೋ ಒಂದು ಮಹತ್ತರವಾದ ಕಾರ್ಯಕ್ಕಾಗಿ ನಮ್ಮನ್ನು ಪ್ರೇರೇಪಿಸುತ್ತಿದೆಯೋ ಅನ್ನಿಸುವಷ್ಟರ ಮಟ್ಟಿಗೆ ನಮ್ಮ ಚಿಂತನೆಗಳು ಬೆಳೆಯಲಾರಂಬಿಸುತ್ತದೆ.

ವಿದ್ಯಾರ್ಥಿ ಜೀವನದಲ್ಲಿ ಎದುರಿಸಿದ ಸಮಸ್ಯೆ-ಸವಾಲು-ಅನ್ಯಾಯ-ಅವಮಾನಗಳೇ ನಮ್ಮ ಮುಂದಿನ ಸಂಘಟನಾತ್ಮಕ ಬದುಕಿಗೆ ಅತ್ಯಮೂಲ್ಯವಾದ ಹೆಜ್ಜೆಗಳಾಗಿ ಬಿಡುತ್ತವೆ. ವಿದ್ಯಾರ್ಥಿ ಜೀವನ ಮುಗಿಸಿ ಸಾಮಾಜಿಕ ಬದುಕಿಗೆ ಬಂದು ಸುಮ್ಮನಿರಕೂಡದು. ಸಮಾಜದ ಹಿತಕ್ಕಾಗಿ ಚಿಂತಿಸುವ ಧ್ವನಿಯಾಗಬೇಕು, ವಿಶಾಲವಾದ ಸಾಗರದಂತಿರುವ ಈ ಸಮಾಜದಲ್ಲಿ, ನಮ್ಮ ಬದುಕನ್ನು ರಾಷ್ಟ್ರದ ಹಿತಕ್ಕಾಗಿ ಸಮರ್ಪಿಸಬೇಕು. ಈ ಭೂಮಿಯ ಮೇಲೆ ಉಸಿರಿಲ್ಲದಾಗ ನಮ್ಮ ಹೆಸರಿರಬೇಕು. ಇಂತಹ ಶ್ರೇಷ್ಠವಾದ ಬದುಕು ನಮ್ಮದಾಗಬೇಕು ಎಂಬ ಚಿಂತನೆಯಲ್ಲಿ ರಾಷ್ಟ್ರ ಕಾರ್ಯಕ್ಕಾಗಿ ಸಮರ್ಪಣೆಯಾಗಲು ಧರ್ಮ ಸಂಸ್ಥಾಪನಾ ಪೀಠ ಯುವ ಭಾರತ್ ಕರ್ನಾಟಕವು ಅತೀ ಉತ್ಸಾಹದಿಂದ ಸಾಗುತ್ತದೆ.

ಮುಂದಿನ ದಿನಗಳಲ್ಲಿ ಮಂಗಳೂರಿನ ಸಾವಿರಾರು ಬಿಸಿರಕ್ತದ ತರುಣರಿಂದ ಸಂಘಟಿಸಲ್ಪಟ್ಟ ಯುವಶಕ್ತಿ ಸಂಘಟನೆಯ ಸಂಪರ್ಕ ನಮಗಾಗುತ್ತದೆ.

ಯುವ ಭಾರತ್ ನಿರ್ಣಾಯಕ ಹೆಜ್ಜೆ....

ಅದ್ಭುತವಾದ ಹೃದಯ ವೈಶಾಲ್ಯತೆಯನ್ನು ಬೆಳೆಸಿಕೊಂಡು, ರಾಷ್ಟ್ರಾಭಿಮಾನವನ್ನು ಸಂಪೂರ್ಣವಾಗಿ ಮೈತುಂಬಿಸಿಕೊಂಡು ಬಿಟ್ಟಿದ್ದ ಯುವ ಭಾರತ್ ಸುದೀರ್ಘವಾಗಿ ನಡೆಸಿಕೊಂಡು ಬಂದಿರುವ ಕಾರ್ಯಗಳ ಸಿಂಹಾವಲೋಕನ. ಆವಾಗಲೇ ನೋಡಿ ನಮ್ಮಲ್ಲಿರುವ ಶಕ್ತಿಯನ್ನು ನಾವೇ ಪ್ರಶ್ನಿಸುವಂತಹ ಸನ್ನಿವೇಶ ಎದುರಾಗುವುದು. 

ಬದುಕಿನ ಉದ್ದಕ್ಕೂ ಇಂತಹ ಕಾರ್ಯಗಳಿಗೆ ಮಾತ್ರ ನಾವು ಸೀಮಿತವಾಗಿರುವುದೇ...? ಸಮಾಜದಲ್ಲಿ ಇಂತಹ ಕಾರ್ಯಗಳು ಎಲ್ಲಾ ಕಡೆಯಲ್ಲೂ ನಡೆಯುತ್ತಿಲ್ಲವೇ..? ಈ ಕಾರ್ಯಗಳು ಕೊನೆಗೆ ನಮ್ಮೊಂದಿಗೆ ಅಂತ್ಯವಾಗುವುದಿಲ್ಲವೇ, ನಮಗೆ ಜನ್ಮವಿತ್ತ ಈ ಪುಣ್ಯ ಭೂಮಿಗೆ ಏನನ್ನೂ ಕೊಟ್ಟು ಹೋಗದ ನಿರರ್ಥಕ ಬದುಕು ನಮ್ಮದಾಗೋದಿಲ್ವೇ...? ಇಂತಹ ಪ್ರಶ್ನೆಗಳು ಕೆಣಕಲು ಪ್ರಾರಂಭವಾದಾಗಲೇ ನಮ್ಮ ಕಣ್ಣ ಮುಂದೆ ರಾಷ್ಟ್ರದ ಜ್ವಲಂತ ಸಮಸ್ಯೆಗಳು ಆನಾವರಣವಾಗೋದು... 

ತಮ್ಮ ಮಕ್ಕಳಿಂದ ವೃದ್ಧಾಶ್ರಮಗಳಿಗೆ ದೂಡಲ್ಪಡುತ್ತಿರುವ ಅಸಹಾಯಕ ಹಿರಿಯ ಜೀವಗಳು ನಮ್ಮ ಕೊರಳಪಟ್ಟಿ ಹಿಡಿದು ರೋಧಿಸುವಂತೆ ಭಾಸವಾಗುತ್ತಿತ್ತು. ಈ ಮಣ್ಣಿನ ಸಂಸ್ಕೃತಿಯನ್ನೇ ಮರೆತ ಶಿಕ್ಷಣ ಸಂಸ್ಥೆಗಳು ಹಣ ಗಳಿಕೆಯ ಕರಾಳ ದಂಧೆಯಾಗಿ ಅಬ್ಬರಿಸುತ್ತಿರುವುದು ಗೋಚರಿಸುತ್ತಿತ್ತು. ಆಚಾರ-ವಿಚಾರ, ಜೀವನ ಶೈಲಿಯ ಬದಲಾವಣೆಯ ಕಾರಣವಾಗಿ ರೋಗಗಳನ್ನು ಬರಮಾಡಿಕೊಂಡ ಮನೆಗಳು ಅಲೋಪತಿ ಔಷಧ ಮತ್ತು ಚಿಕಿತ್ಸಾ ಪದ್ಧತಿಯ ಮಾಫಿಯಾಗಳಿಂದಾಗಿ ಸ್ಮಶಾನ ಸದೃಶವಾಗಿರುವಂತೆ ತೋರುತ್ತಿತ್ತು. ಇಡೀ ಜಗತ್ತಿಗೆ ಶಾಂತಿಯ ಸಂದೇಶವನ್ನು ಸಾರಿದ ಭಾರತದಲ್ಲಿ ಭಯೋತ್ಪಾದನೆ ರಣಕೇಕೆ ಹಾಕುತ್ತಿತ್ತು. ಮಾದಕ ದ್ರವ್ಯ ವ್ಯಸನದಿಂದ ನಡೆಯುತ್ತಿರುವ ಅಪರಾಧಿ ಚಟುವಟಿಕೆಗಳು, ಮನುಷ್ಯತ್ವವೇ ಸತ್ತು ಹೋದಂತೆ ತೋರುವ ಅತ್ಯಾಚಾರಿಗಳು ಕಣ್ಣೆದುರು ಬಂದು ಆರ್ಭಟಿಸುವಂತೆ ಕಾಣುತ್ತಿತ್ತು. ನಮ್ಮ ಬದುಕಿನ ಜೀವನಾಡಿ ನದಿ-ಸರೋವರ-ಕಾಡುಗಳು ನಮ್ಮ ಸ್ವಾರ್ಥದ ಬದುಕಿನಿಂದಾಗಿ ವಿನಾಶದಂಚಿಗೆ ಹೋಗುತ್ತಿರುವುದರ  ಪರಿಣಾಮವಾಗಿ, ಮಾರಕ ರೋಗಗಳು-ಭೂಕಂಪ-ಜಲಪ್ರಳಯಗಳಂತಹ ಭಯಾನಕ ಗಂಡಾಂತರಗಳಿಂದ  ನಮ್ಮ ಸರ್ವನಾಶ ಆಗಿಯೇ ಬಿಡುತ್ತಾ ಅನ್ನುವ ಭಯ ಆವರಿಸುತ್ತಿತ್ತು. ರಾಷ್ಟ್ರದ ಪರಮ ವೈಭವದ ನಿರ್ಮಾಣ ರಾಜಕಾರಣಿಗಳಿಂದಲೇ ಆಗುವುದು ಎನ್ನುವ ರೀತಿಯಲ್ಲಿ ಯುವ ಸಮಾಜದ ಭ್ರಮೆಯ ಬದುಕು  ಭಾರತವನ್ನೇ ಸೋಲಿನ ದವಡೆಗೆ ದೂಡಿ ಬಿಡಬಹುದೇನೋ ಎಂಬ ಆತಂಕ ಮೂಡುತ್ತಿತ್ತು. 

ಮನೆಯೇ ಮೊದಲ ಪಾಠಶಾಲೆ... ತಾಯಿಯೇ ಮೊದಲ ಗುರು.

ಸಂಸ್ಕಾರ-ಸಂಸ್ಕೃತಿ, ಆಚಾರ-ವಿಚಾರಗಳ ಪಾಠವನ್ನು ಕಲಿಸಿಕೊಡಬೇಕಾಗಿದ್ದ ತಾಯಂದಿರು ತಮ್ಮ ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗುತ್ತಿದ್ದಾರೆ. ಕಲಿಕೆಯ ವಿಚಾರದಲ್ಲಿ ಮಕ್ಕಳಿಗಿಂತ ಹೆತ್ತವರಲ್ಲಿಯೇ ನಡೆಯುವ ಪೈಪೋಟಿಯ ಪರಿಣಾಮವಾಗಿ, ತಮ್ಮ ದಾಹವನ್ನು ತೀರಿಸಿಕೊಳ್ಳುವ ದಾಳವಾಗಿ ಮಕ್ಕಳು ಬಲಿಯಾಗುತ್ತಿದ್ದಾರೆ. ಮಕ್ಕಳಲ್ಲಿ ಇರುವ ಅಧಮ್ಯ ಶಕ್ತಿಯನ್ನು ಗುರುತಿಸುವ ಇಚ್ಛಾಶಕ್ತಿಯೇ ಹೆತ್ತವರಲ್ಲಿ ಸತ್ತು ಹೋದಂತೆ ಕಾಣುತ್ತಿದೆ. ಇದರ ಪರಿಣಾಮವಾಗಿ, ನಮ್ಮ ಮಕ್ಕಳಲ್ಲಿ ಸಂಸ್ಕಾರ-ಸಂಸ್ಕೃತಿ, ಆಚಾರ-ವಿಚಾರ, ಸ್ವಾಭಿಮಾನ, ಹೋರಾಟದ ಮನೋಭಾವ, ಸಾಮಾಜಿಕ ಕಾಳಜಿ, ರಾಷ್ಟ್ರಾಭಿಮಾನ ಮತ್ತು ಧರ್ಮದ ಮೇಲಿನ ಶ್ರದ್ಧೆಯ ಕೊರತೆ ಸಮಾಜದಲ್ಲಿ ಎದ್ದು ಕಾಣುತ್ತಿದೆ.

ಗುರು ಅಂದರೆ ಪ್ರದೀಪ...ಶಿಷ್ಯ ಅಂದರೆ ದೀಪ

ಒಂದು ಉತ್ಕೃಷ್ಟವಾದ ಕಾರ್ಯದ ಸಾಧನೆಗಾಗಿ, ತನ್ನ ಸ್ವಂತದ್ದಾದ ಸಂಕಲ್ಪ ಶಕ್ತಿಯಿಂದ ಪ್ರಜ್ವಲಿಸುತ್ತಿರುವ ಪ್ರಕಾಶದಲ್ಲಿ, ದೀಪಗಳನ್ನು ಸೃಷ್ಟಿಸುವ ದಿವ್ಯ ಶಕ್ತಿಯೇ ಪ್ರದೀಪವಾಗಿದೆ. ಭೂಮಿಯ ಮೇಲೆ ನಡೆಯಲಿರುವ ಮಹಾನ್ ಕಾರ್ಯಗಳಿಗಾಗಿ ಪ್ರದೀಪದಿಂದ ಹಚ್ಚಿಸಿಕೊಂಡು, ಸದಾಕಾಲ ಉರಿದು ಜಗತ್ತಿಗೆ ಬೆಳಕಾಗುವುದೇ ದೀಪವಾಗಿದೆ.

ಭಾರತದಲ್ಲಿ ಶಿಕ್ಷಣವಿದೆ... ಆದರೆ ಶಿಕ್ಷಣದಲ್ಲಿ ಭಾರತವೇ ಇಲ್ಲ

ಇವತ್ತಿನ ಶಿಕ್ಷಣವು ಅರ್ಥವ್ಯವಸ್ಥೆಯ ತಕ್ಷಣದ ಅವಶ್ಯಕತೆಗಳಿಗೆ ಜನರನ್ನು ಪೂರೈಸಲು ಇರುವ ಬೃಹತ್ತ್ ಉತ್ಪಾದನಾ ಘಟಕವಾಗಿದೆ. ನಮ್ಮನ್ನು ವ್ಯವಸ್ಥೆಯ ಗುಲಾಮರನ್ನಾಗಿ ಮಾಡಿರುವುದು ಮಾತ್ರವಲ್ಲದೆ, ಮನುಷ್ಯ ಮುಖ್ಯ ಅಲ್ಲ... ಸಮಾಜದ ಚಾಕಿರಿ ಮುಖ್ಯ ಅಂತಿದೆ. ಶಿಕ್ಷಣ ಅಂದರೆ ಶಿಕ್ಷೆ+ಹಣ. ಭವಿಷ್ಯದ ಒಂದು ಅದ್ಭುತವಾದ ಶಕ್ತಿಯಾಗಿ ಬೆಳೆಯ ಬೇಕಾಗಿರುವ ಮಗುವಿಗೆ ಶಿಕ್ಷೆ, ವಿದ್ಯಾ ಸಂಸ್ಥೆ ಎಂಬ ಮುಖವಾಡವಿರುವ ಲೂಟಿಕೋರರಿಗೆ ಹಣ ಎಂಬಂತಾಗಿದೆ ಈಗಿನ ಶಿಕ್ಷಣ ವ್ಯವಸ್ಥೆ.  ತನ್ನ ಶ್ರೇಷ್ಠವಾದ ವೃತ್ತಿ ಧರ್ಮದ ಮೇಲಿರುವ ಅಭಿಮಾನದ ಕೊರತೆ, ವಿದ್ಯಾರ್ಥಿಗಳನ್ನು ತನ್ನ ಮಕ್ಕಳಷ್ಟು ಪ್ರೀತಿಸದ ಮನಸ್ಥಿತಿ, ಕೇವಲ ಉಪನ್ಯಾಸ ಮಾಡಿ ಸಂಭಾವನೆ ಪಡೆಯೋದಕ್ಕೆ ಮಾತ್ರ ಸೀಮಿತವಾಗಿರುವ ಉಪನ್ಯಾಸಕರು ಇಂದು ನಮ್ಮ ಮಕ್ಕಳನ್ನು ಒಂದು ಶಕ್ತಿಯಾಗಿ ಬೆಳೆಸುವಲ್ಲಿ ಸೋಲುತ್ತಿದ್ದಾರೆ. ಹಾಗಾಗಿ ಸುದೃಢವಾದ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಪಾತ್ರವಹಿಸಬೇಕಾಗಿದ್ದ ಮಕ್ಕಳ ಭವಿಷ್ಯ ಏನಾಗುತ್ತಿದೆ..? 

ಇಂದಿನ ಯುವ ಸಮಾಜವು ಸಾಮಾಜಿಕ ಜಗತ್ತಿಗೆ ಕಾಲಿಡುತ್ತಿದ್ದಂತೆ, ಭ್ರಷ್ಟಾಚಾರವನ್ನೇ ಬದುಕಾಗಿಸಿಕೊಂಡ ಮತ್ತು ಧರ್ಮ-ಜಾತಿಗಳನ್ನು ಒಡೆದಾಳುವ ರಾಜಕೀಯ ನಾಯಕರುಗಳು ನಮ್ಮ ಮಕ್ಕಳ ಮನಸ್ಸಿನಲ್ಲಿ ನಿಜವಾದ ನಾಯಕರಾಗಿ ಮೆರೆಯುತ್ತಿದ್ದಾರೆ. ನೀತಿ ಮತ್ತು ಮಾನವೀಯತೆ ಇಲ್ಲದ ವ್ಯಾಪಾರದಲ್ಲಿ ಹಣಗಳಿಕೆಯೊಂದೇ ಬದುಕಿನ ಸಾಮರ್ಥ್ಯ-ಸಾಧನೆ ಅಂತಾ ಬೀಗುವ ಉದ್ಯಮಿಗಳು ನಮ್ಮ ಮಕ್ಕಳಿಗೆ ಇಂದು ಮಹಾನ್ ಸಾಧಕರಾಗಿ ಕಾಣುತ್ತಿದ್ದಾರೆ. ಸಂಸ್ಕೃತಿ-ಸಂಸ್ಕಾರದ ಪರಿವೆಯೇ ಇಲ್ಲದ ಸಿನೇಮಾ ತಾರೆಯರು ಇಂದು ನಮ್ಮ ಮಕ್ಕಳ ಪಾಲಿನ ಹೀರೋಗಳಾಗುತ್ತಿದ್ದಾರೆ. ಹಾಗಾದರೆ... ನಮ್ಮ ಮಕ್ಕಳು ಈ ಭೂಮಿಯ ಮೇಲೆ ಚರಿತ್ರೆ ನಿರ್ಮಾಣ ಮಾಡಬಲ್ಲ ಶಕ್ತಿಗಳಾಗುವುದು ಹೇಗೆ...?

ಭೂಮಿಯ ಮೇಲೆ ನಡೆಯಲಿರುವ ಒಂದು ಅದ್ಭುತವಾದ ಕಾರ್ಯದ ಸಂಕಲ್ಪಕ್ಕಾಗಿ ನಮ್ಮನ್ನು ನಾವು ಸಂಪೂರ್ಣವಾಗಿ ಸಮರ್ಪಣೆ ಮಾಡಿಕೊಳ್ಳಲೇಬೇಕು ಎಂಬ ಗಟ್ಟಿಯಾದ ದಿಟ್ಟ ಹೆಜ್ಜೆಯೇ ಮುಂದಕ್ಕೆ ಭವಿಷ್ಯ ಭಾರತ ಯೋಜನೆ ಮತ್ತು ಗುರುಕುಲ ವಿದ್ಯಾಪೀಠ ಸ್ಥಾಪನೆಯ ಮಹಾನ್ ಸಂಕಲ್ಪಕ್ಕೆ ಇದು ನಾಂದಿಯಾಗುತ್ತದೆ. 

ಭವಿಷ್ಯ ಭಾರತ ಯೋಜನೆ ಮತ್ತು ಗುರುಕುಲ ವಿದ್ಯಾಪೀಠ ಸ್ಥಾಪನೆಯ ಮಹಾನ್ ಸಂಕಲ್ಪ

ಸಾರ್ಥಕ್ಯದ ಬದುಕಿಗಾಗಿ ಬದುಕಬೇಕು ಎನ್ನುವ ಗಂಭೀರವಾದ ಚಿಂತನೆಯಲ್ಲಿ ನಾವು ಇರುವಾಗಲೇ... “ಸನಾತನ ಧರ್ಮ ರಾಜ್ಯದ ಸ್ಥಾಪನೆ ಅತೀ ಅವಶ್ಯವಾಗಿದೆ. ಸಂತರ ಮಾರ್ಗದರ್ಶನದಲ್ಲಿ ಕ್ಷಾತ್ರ ತೇಜಸ್ಸಿನ ಸಂಸ್ಕಾರವಂತ ಮತ್ತು ಸ್ವಾಭಿಮಾನಿ ತರುಣ-ತರುಣಿಯರ ತಯಾರಿಗಾಗಿ, ಗುರುಕುಲ ವಿದ್ಯಾಪೀಠ ಸ್ಥಾಪನೆಯು ಅತೀ ಅವಶ್ಯವಾಗಿದೆ” ಎನ್ನುವ ಶಬ್ದ ಶಂಖನಾದದಂತೆ ನಿದ್ದೆಯಲ್ಲಿಯೂ ನಮ್ಮನ್ನು ಎಚ್ಚರಿಸಿ-ಎಬ್ಬಿಸಿ ಹೇಳಿ ಹೋಗುತ್ತಿರುವಂತೆ ಭಾಸವಾಗುತ್ತಿತ್ತು. ಈ ಎಲ್ಲಾ ಬೆಳವಣಿಗೆಗಳೇ ಮುಂದಕ್ಕೆ ಭವಿಷ್ಯ ಭಾರತ ಯೋಜನೆ ಹಾಗೂ ಗುರುಕುಲ ವಿದ್ಯಾಪೀಠ ಸ್ಥಾಪನೆಯ ಅತ್ಯದ್ಭುತವಾದ ಸತ್-ಸಂಕಲ್ಪಕ್ಕೆ ನಾಂದಿಯಾಗುತ್ತದೆ.

 ಭಾರತದಲ್ಲಿ ಶಿಕ್ಷಣವಿದೆ .... ಶಿಕ್ಷಣದಲ್ಲಿ ಭಾರತವೇ ಇಲ್ಲ. 
ಪರಕೀಯರ ಶಿಕ್ಷಣದಲ್ಲಿ ಧನ ಸಂಪಾದನೆಯೇ ಮೂಲ ಗುರಿ. 
ಭಾರತೀಯ ಶಿಕ್ಷಣದ ಪರಮ ಉದ್ದೇಶವೇ ಆತ್ಮೋದ್ಧಾರ. 

ಗುರುಕುಲ ವಿದ್ಯಾಪೀಠ ಸ್ಥಾಪನೆಯ ಸತ್-ಸಂಕಲ್ಪದ ಶಕ್ತಿಯೇ ಅಂತಹದ್ದೋ ಏನೋ... ಒಂದು  ಪರಿಪೂರ್ಣತೆಯ ನಿಷ್ಕಲ್ಮಶ ವ್ಯಕ್ತಿತ್ವ. ನಮ್ಮನ್ನು ತನ್ನ ಸ್ವಂತ ಮಕ್ಕಳಂತೆ ಪ್ರೀತಿಸುವ ಹೃದಯ ವೈಶಾಲ್ಯತೆ. ಈ ಪ್ರೀತಿಯ ಮೂಲಕವೇ ಸಣ್ಣ-ಸಣ್ಣ ದೀಪಗಳಂತೆ ನಮ್ಮನ್ನು ಸಿದ್ಧಗೊಳಿಸಿ, ಇಡೀ ಜಗತ್ತಿಗೆ ಬೆಳಕು ನಿಡುವ ಶಕ್ತಿಯಾಗಿ ಸಮರ್ಪಣೆ ಮಾಡಬೇಕೆನ್ನುವ ತುಡಿತ. ಇಂತಹ ಒಂದು ಅದ್ಭುತವಾದ ಶಕ್ತಿಯನ್ನು ಪ್ರಭಾವಿಸಲ್ಪಡುತ್ತದೆ ಧರ್ಮ ಸಂಸ್ಥಾಪನಾ ಪೀಠ, ಯುವ ಭಾರತ್.

ಆ ಶಕ್ತಿಯೇ ನಮ್ಮೆಲ್ಲರ ಆದರಣೀಯ ಗುರುಗಳು ಕೆ. ರಾಜೇಂದ್ರ ಭಟ್. 

ಸಾಧು-ಸಂತರ ದಿವ್ಯ ಜ್ಞಾನದಿಂದ ಪ್ರಾಪ್ತವಾದ ಬೆಳಕಿನಲ್ಲಿ ಅತ್ಯಂತ ನೈಸರ್ಗಿಕವಾಗಿ ಸಂಕಲ್ಪ ಮಾಡಿದ್ದೀವಿ. ಗುರುಕುಲ ವಿದ್ಯಾಪೀಠ ಸ್ಥಾಪನೆಯು ನಮ್ಮ ಬದುಕಿನ ಮಹಾನ್ ಯಜ್ಞವಾಗಿದೆ. ಹವಿಸ್ಸಿನಂತೆ ಬದುಕನ್ನು ಸಮರ್ಪಿಸಿಕೊಂಡು ಭಸ್ಮವಾಗುವುದು ನಮ್ಮ ಸಂಕಲ್ಪವಾಗಿದೆ.